೧
ಕಾಡಿನಲ್ಲೆಲ್ಲೋ ನಡುಗಿದ
ಜಿಂಕೆ ಮರಿ ಎದೆಯ ಸದ್ದು
ಮಲಗಿರುವೆ ಬೆಚ್ಚಗೆ
ನೆನಪುಗಳನೆ ಹೊದ್ದು
ಎಲ್ಲಿದ್ದರೂ ಸುಖವಾಗಿರು
೨
ನಡುರಾತ್ರಿ ಜತೆಯಾಗಿ ಕೇಳಿದ
ಹಾಡಿನ ವಿಷಾದ ರಾಗ
ಎಲ್ಲಿಂದ ತೇಲಿ ಬಂದು
ನಡುಗಿಸಿತು ಮನವ ಈಗ?
೩
ಎಷ್ಟೊಂದು ಸಲೀಸಾಗಿ
ಹೊಳೆದಿತ್ತು ಹೆಸರದು ಅಂದು
ಏನೆಂದು ಕರೆಯುತಿರುವೆಯೊ
ಪುಟ್ಟ ಮಗಳನು ಇಂದು
೪
ನಾನು ನೀನು ಆನು ತಾನು
ಜೇನು ಭಾನು ಕಾನು ಫೋನು
ಪದಕೆ ಇಲ್ಲದಿದ್ದರೂ ಅರ್ಥ
ಮಾತಾಡಿದ್ದಾದೀತೆ ವ್ಯರ್ಥ?
೫
ಅವನ ಜತೆ ಬೆಚ್ಚಗೆ ನೀನು
ಮಲಗಿರುವೆ ಮನೆಯ ಒಳಗೆ
ಮಳೆಯ ರಾತ್ರಿ ನಡುಗುತ್ತಾ
ನಿಂತಿರುವೆ ನಾನು ಹೊರಗೆ
ಮಳೆ ಬರುತ್ತಲೇ ಇರಲಿ ಹೀಗೇ
ನನ್ನ ನಡುಕ ನಿನಗೆ ನಿನ್ನ
ನಡುಕ ನನಗೆ ಕೇಳಿಬರದಿರಲಿ