Monday, January 30, 2012
ಕೂರ್ಮಾವತಾರ ವಿಮರ್ಶೆ
(ಕಳೆದ ಶುಕ್ರವಾರದ ಉದಯವಾಣಿ ಸಿನಿಮಾ ಪುರವಣಿಯಲ್ಲಿ ಪ್ರಕಟಗೊಂಡ ಕಿರುಬರಹ)
ಗಾಂಧಿಯನ್ನು ಮತ್ತೆ ಮತ್ತೆ ಗುಂಡುಹಾರಿಸಿ ಕೊಲ್ಲಲಾಗುತ್ತಿದೆ. ಕೊನೆಗೊಮ್ಮೆ ಸರಿಯಾಗಿ ಕೊಂದ ಸಮಾಧಾನವಾಗಿದೆ. ಬಾಲ್ಕನಿಯಲ್ಲಿ ನಿಂತು ಇದನ್ನು ನೋಡುತ್ತಿದ್ದ ನೆಹರೂ ಮತ್ತು ವಲ್ಲಭಭಾಯಿ ಪಟೇಲರು ನಗುಮುಖದೊಂದಿಗೆ ಚಪ್ಪಾಳೆ ಹೊಡೆಯುತ್ತಾರೆ......
ಹೀಗೆ ಶುರುವಾಗುವ ಗಿರೀಶ್ ಕಾಸರವಳ್ಳಿಯವರ ‘ಕೂರ್ಮಾವತಾರ’(ಕುಂವೀ ಕತೆ ಆಧರಿತ), ಕಡೆಯವರೆಗೂ ಇಂಥ ಹಿತವಾದ ಹೊಸ ಅನುಭವಗಳನ್ನು ಕೊಡುತ್ತಾ ಸಾಗುತ್ತದೆ. ಗಾಂಧೀಜಿಯ ಬಗ್ಗೆ ಸಣ್ಣ ಕುತೂಹಲವೂ ಇಲ್ಲದ, ನಿವೃತ್ತಿಯ ಅಂಚಿನಲ್ಲಿ ಫೈಲುಗಳಲ್ಲೇ ಮುಳುಗಿರುವ ಸರ್ಕಾರಿ ಗುಮಾಸ್ತ ಇಲ್ಲಿನ ಮುಖ್ಯಪಾತ್ರ. ನೋಡಲು ಹಾಗೆ ಕಾಣುವ ಒಂದೇ ಕಾರಣಕ್ಕೆ ಟಿವಿ ಧಾರಾವಾಹಿಯೊಂದರ ಗಾಂಧಿ ಪಾತ್ರದಲ್ಲಿ ಅಭಿನಯಿಸುವ ಅನಿವಾರ್ಯಕ್ಕೆ ಸಿಲುಕುವ ಈತ, ಅದರಿಂದಾಗಿ ದೊರೆತ ಜನಪ್ರಿಯತೆ, ಹಣ ಮತ್ತು ಪ್ರಾಮುಖ್ಯತೆಗಳ ಮುಂದೆ ಕಂಗೆಡುತ್ತಾನೆ. ಮಹಾತ್ಮನ ಪಾತ್ರದ ಅಭಿನಯದಿಂದ ಬದಲಾದ ಸನ್ನಿವೇಶವೇ ಅವನನ್ನು ಭಷ್ಟತೆ ಮತ್ತು ಹಣದ ದಾಹದತ್ತ ದಬ್ಬತೊಡಗುತ್ತದೆ. ಅತ್ತ ಕೆಟ್ಟವನೂ ಅಲ್ಲದ, ಇತ್ತ ಆದರ್ಶವಾದಿಯೂ ಅಲ್ಲದ ಈ ಸಾಮಾನ್ಯ ಗುಮಾಸ್ತನನ್ನು ಗಾಂಧಿ ಎಲ್ಲೆಲ್ಲಿಗೆ ಕರೆದೊಯ್ಯುತ್ತಾರೆ ಎಂಬುದು ಕತೆ.
ಅಪರಿಮಿತ ಸಾಧ್ಯತೆಗಳ ಈ ಕತೆಯನ್ನು ಕಾಸರವಳ್ಳಿ ತುಂಬಾ ಸೂಕ್ಷ್ಮ ಲವಲವಿಕೆಯೊಂದಿಗೆ ನಿರೂಪಿಸಿದ್ದಾರೆ. ಮೊದಲ ಬಾರಿಗೆ ಅವರ ಸಿನಿಮಾದಲ್ಲಿ ನೂರೆಂಟು ಪಾತ್ರಗಳು, ಅದರಲ್ಲೂ ಯುವ ನಟರ ದಂಡು ಹಿತವೆನಿಸುತ್ತದೆ. ಕತೆ ಸಂಕೀರ್ಣವಾಗಿದ್ದರೂ ನಿರೂಪಣೆ ಸರಳವಾಗಿದೆ ಎನಿಸುವುದು ಚಿತ್ರದ ಪ್ಲಸ್ ಪಾಯಿಂಟ್. ನೆಹರೂ, ಪಟೇಲ್ ಇತ್ಯಾದಿ ಪಾತ್ರಗಳು ಸದಾ ಪೂರ್ಣ ಮೇಕಪ್ನೊಂದಿಗೆ ಶೂಟಿಂಗ್ ಸ್ಥಳದಲ್ಲಿ ಓಡಾಡಿಕೊಂಡಿರುವುದು ಚಿತ್ರಕ್ಕೆ ಸಹಜವಾದ ಹೊಸ ಆವರಣವೊಂದನ್ನು ಕಲ್ಪಿಸಿಕೊಟ್ಟಿದೆ.
ಅಭಿನಯ ಬರಲ್ಲ ಅಂತ ಚಿತ್ರದುದ್ದಕ್ಕೂ ಎಲ್ಲರಿಂದ ಬಯ್ಯಿಸಿಕೊಳ್ಳುತ್ತಲೇ ಇರುವ ಗಾಂಧಿ ಪಾತ್ರಧಾರಿ ಶಿಕಾರಿಪುರ ಕೃಷ್ಣಮೂರ್ತಿಯವರ ಅಭಿನಯ ಹೊಗಳುವಂತಿದೆ. ಬಹಳ ದಿನಗಳ ನಂತರ ತೆರೆಗೆ ಬಂದಿರುವ ಜಯಂತಿ ಇಲ್ಲಿ ಸೊಗಸಾಗಿ ಅಭಿನಯಿಸಿದ್ದಾರೆ. ಗಾಂಧಿ ಕಸ್ತೂರಬಾ ಜಗಳದ ಮತ್ತು ಕಸ್ತೂರಬಾಯಿ ತೀರಿಹೋದಾಗಿನ ದೃಶ್ಯಗಳು ಮನಸೆಳೆಯುವಂತಿವೆ. ಪ್ರತಿಯೊಂದು ಪಾತ್ರವೂ ಚಿತ್ರವನ್ನು ಉಜ್ವಲಗೊಳಿಸುವಲ್ಲಿ ತಮ್ಮ ಕಾಣಿಕೆ ನೀಡಿವೆ. ಜಿ ಎಸ್ ಭಾಸ್ಕರ್ ಅವರ ಮಾಯಾಕ್ಯಾಮೆರಾದಲ್ಲಿ ಮೂಡಿರುವ ಚಿತ್ರಿಕೆಗಳು ನಾವು ಸದಾ ಉದಾಹರಿಸುವ ಇರಾನಿ ಚಿತ್ರಗಳ ಸೊಗಸನ್ನು ಮರೆಸುತ್ತವೆ(ನೆನಪಿಸುವುದಲ್ಲ!). ಒಟ್ಟಾರೆ ಈ ಸಿನಿಮಾವನ್ನು ನೀವು ತಪ್ಪದೆ ನೋಡಬೇಕೆಂಬುದಕ್ಕೆ ಒಂದಕ್ಕಿಂತ ಹೆಚ್ಚು ಕಾರಣಗಳಿವೆ.
ದ್ವಿತೀಯಾರ್ಧದಲ್ಲಿ ಸಿನಿಮಾ ಇದ್ದಲ್ಲೇ ಹರಡಿಕೊಳ್ಳುತ್ತಾ ಹೋಗುತ್ತದೆ. ಹಿಂದೂ ಮುಸ್ಲಿಮ್ ಕೋನವನ್ನು ಕತೆಗೆ ಸೇರಿಸುವ ಪ್ರಯತ್ನ ಬೇಕಿತ್ತೆ ಎನಿಸುತ್ತದೆ. ಗೋಡ್ಸೆ ಪಾತ್ರವನ್ನು ಮುಸ್ಲಿಮ್ ಹುಡುಗ ಅಭಿನಯಿಸುವ ಬಗ್ಗೆ ಯಾರೋ ಆಕ್ಷೇಪ ಎತ್ತುವ ಕತೆಯ ಭಾಗಗಳು ನಂಬಿಕೆ ಹುಟ್ಟಿಸುವುದಿಲ್ಲ. ಇಂಥವುಗಳ ಬದಲು ಗಾಂಧಿ ಮತ್ತು ಗಾಂಧಿಪಾತ್ರದ ನಡುವಿನ ಸಂಘರ್ಷವನ್ನೇ ಇನ್ನೂ ಹೆಚ್ಚು ತೀವ್ರಗೊಳಿಸುತ್ತಾ ಒಂದು ಶಿಖರ ಮುಟ್ಟಿಸಿ, ಬೆರಗುಗೊಳಿಸುವ ಅಂತ್ಯದೆಡೆಗೆ ಸಿನಿಮಾವನ್ನು ಕೊಂಡೊಯ್ಯಬಹುದಾಗಿತ್ತೇನೊ. ಆದರೆ ಅದು ಬೇರೆಯದೇ ಕತೆ..
ಪ್ರತಿಭಟನೆಯಂತೆ ಒಳ್ಳೆಯ ಸಿನಿಮಾಗಳನ್ನು ನಿರ್ದೇಶಿಸುತ್ತಾ, ನಿರಂತರವಾಗಿ ಕನ್ನಡದ ಪ್ಯಾರಲಲ್ ಸಿನಿಮಾಗಳಿಗೊಂದು ಘನತೆಯನ್ನು ನೀಡುತ್ತಾ ಬಂದಿರುವ ಏಕಾಂಗಿವೀರ ಗಿರೀಶ್ಗೆ ವಂದನೆಗಳು. ಅವರ ಈ ‘ಗಾಂಧಿ’ ಮಾರ್ಗ ಮತ್ತು ನಮ್ಮ ‘ಗಾಂಧಿ ನಗರ’ಗಳನ್ನು ಬೆಸೆಯುವ ‘ಸೇತುವೆ’ ಕಾಮಗಾರಿ ಬೇಗ ಶುರುವಾಗಲಿ .
-ಅಪಾರ
Subscribe to:
Posts (Atom)