
ಇತ್ತೀಚೆಗೆ ನನಗೆ ಅತ್ಯಂತ ಇಷ್ಟವಾಗಿರುವುದು ಎಸ್ ಮಂಜುನಾಥರ ಪದ್ಯಗಳು। ಕನ್ನಡ ಪದಗಳು ಅವರು ಬೆರಳಿಂದ ಮುಟ್ಟಿ ಕವನದ ಸಾಲಲ್ಲಿ ಇಟ್ಟಮೇಲೆ ಹೊಸ ಚೈತನ್ಯದಿಂದ ಮಿಡಿಯುತ್ತವೆ ಎನಿಸುವಷ್ಟು ನಾನವರ ಕವಿತೆಗೆ ಮರುಳಾಗಿದ್ದೇನೆ। ‘ಜೀವಯಾನ’ ಎಂಬ ಅವರ ೩೨ ಉಪಕವಿತೆಗಳ ಒಂದು ದೀರ್ಘ ಕವಿತೆ ಇದೀಗ ಬಿಡುಗಡೆಗೆ ಸಜ್ಜಾಗಿದೆ। ಈ ಭಾನುವಾರ ಬೆಳಗ್ಗೆ ೧೦।೩೦ಕ್ಕೆ ಗಾಂಧಿಬಜಾರಿನಲ್ಲಿರುವ ಅಂಕಿತ ಪುಸ್ತಕ ಮಳಿಗೆಯಲ್ಲಿ ಈ ಪುಟ್ಟ ಪುಸ್ತಕ ಅನಾವರಣಗೊಳ್ಳಲಿದೆ। ನೀವು ಅಲ್ಲಿ ಬಂದರೆ ಮಂಜುನಾಥ್ ಜತೆ ಮಾತಾಡಬಹುದು। ಕವಿತೆ ಕುರಿತು ಅವರು ಬಹಳ ಪ್ರೀತಿಯಿಂದ ಮಾತಾಡುತ್ತಾರೆ।ಎಚ್ ಎಸ್ ವಿ ಕೂಡ ಇರುತ್ತಾರೆ। ಎಚ್ ಗೋವಿಂದಯ್ಯ ಕಾರ್ಯಕ್ರಮದ ಮತ್ತೊಬ್ಬ ಅತಿಥಿ। ನೀವು ತಪ್ಪದೆ ಬರಬೇಕು ಎಂಬುದು ನನ್ನ ಒತ್ತಾಯ! ಪ್ಲೀಸ್॥
ಈ ಪುಸ್ತಕದ ಮುಖಪುಟದ ಫೋಟೊ ಗೆಳೆಯ ಬಾಲಸುಬ್ರಮಣ್ಯ ತೆಗೆದದ್ದು। ನಿಮ್ಮ ಕುತೂಹಲಕ್ಕೆ ‘ಜೀವಯಾನ’ದ ಮೊದಲ ಕವಿತೆ ಇಲ್ಲಿದೆ। ಉಳಿದದ್ದೆಲ್ಲಾ ಅಲ್ಲಿ ಸಿಕ್ಕಾಗ....
ಊರಿದ ಬೇರಿನ ಗುಂಟ
ಬುತ್ತಿಕಟ್ಟಿಕೊಂಡಾಗಿದೆ ಈ ಪಯಣಕ್ಕೆ
ಎರಡು ಪಿಡಚೆ ಅನ್ನ ಒಕ್ಕುಡಿತೆ ಹಾಲು
ನೀರು-ನೆರಳು, ಒಂದು ಬಾಟಲಿ ಇನ್ನೊಂದು ಛತ್ರಿ ರೂಪದಲ್ಲಿ
ಜೀವೌಷಧ ಎರಡು ಚಿಟಿಕೆ;
ಸಾಕಲ್ಲವೇ ಎಂದು ಕೇಳಿಕೊಂಡೆ-ಅಂತರಾತ್ಮ ಒಪ್ಪಿ
ಸಾಕು ಸಾಕೆಂದು ತಲೆದೂಗಿದೆ
ಊರಿಂದ ಊರಿಗೆ ಸಾಗುವುದಲ್ಲ, ಮಣ್ಣೊಳಗೆ
ಊರಿದ ಬೇರಿನಗುಂಟ ಇಳಿಯುವುದು
ಒಂದು ಮನೆ ನಾಕು ಬೀದಿ ಓಣಿಗಳಲ್ಲೆಲ್ಲಿ
ನಿಂತು ನಡೆದಾಡಿದ್ದು
ಅಂಗಾಲ ಮುದ್ದಿಸಿದ ಮಳೆ ಬಿದ್ದ ಹೂಮಣ್ಣು
ಮುಳ್ಳು ಬೆಣಚುಕಲ್ಲು ಗಾಜಿನ ಚೂರು ನೆಟ್ಟಿದ್ದನ್ನು
ಮರಳಿ ಮುಟ್ಟಿಸಿಕೊಂಡು ಅರಳುವುದು
ಅಲ್ಲಲ್ಲಿ ಅದೇ ಇಲ್ಲಿ
ಹೆಪ್ಪುಗಟ್ಟಿದ ಚಿತ್ರಗಳ ಮುಟ್ಟಿ
ಹೊರಡಿಸುವುದು
ಕಲ್ಲುಗಳು ಕರಗಿ ಹರಿದಾಗಿನ್ನು ಹಿಂದು ಮುಂದೆಲ್ಲಿ
ಯಾವುದನು ತಾನೇ ಮೀರಿ ಬೆಳೆಯುವುದಿಲ್ಲಿ
ಎಲ್ಲವೂ ಒಂದಾಗಿ ಇರುತಿರಲು
ಸಾಧಿಸುವುದೆ ಪಯಣ ಆ ಗುರಿಯನ್ನು